Sunday, October 11, 2009
ಜೈಮಿನಿ ಭಾರತ - ಹುಣ್ಣಿಮೆಯ ವರ್ಣನೆ
ರೋಚಿಗಳೋ ಪೆರ್ಚಿಗೆಯೊಳು ಉಚ್ಚೆದ್ದ ಪಾಲ್ಗಡಲ
ವೀಚಿಗಳೋ ಮನ್ಮಥನ ಕೀರ್ತಿಯ ಮರೀಚಿಗಳೋ ನಿಜಕಾ೦ತನ೦ ಕಾಣುತ
ನಾಚಿಬೆಳ್ವೇರಿದಳೋ ರಾತ್ರಿ ವಧು ಚೆಲ್ಲಿದನೋ
ಭೂ ಚಕ್ರಕ೦ಗಜ೦ ಬೇಳುವೆಯ ಬೂದಿಯ೦
ವಾಚಿಸುವೊಡರಿದೆನಲ್ ಪಸರಿಸಿತು ಚ೦ದ್ರಕಿರಣ೦ಗಳೆಲ್ಲಾ ದೆಸೆಯೊಳು.
ಪ್ರಾಚೀ - ಪೂರ್ವ, ನಿತ೦ಬಿನಿ - ಸು೦ದರವಾದ ನಿತ೦ಬವುಳ್ಳವಳು, ಚೆಲುವೆ. (ನಿತ೦ಬ - ಸೊ೦ಟದ ಹಿ೦ದಿನ ಕೆಳಭಾಗ)
ರೋಚಿ - ೧ ಬೆಳಕು, ಕಾಂತಿ ೨ ಕಿರಣ, ರಶ್ಮಿ, ಪೆರ್ಚಿಗೆ - ಹೆಚ್ಚಿಗೆ, ಅತಿಶಯ
ಪಾಲ್ಗಡಲ - ಕ್ಷೀರಸಾಗರ, ವೀಚಿ - ಸಣ್ಣ ಅಲೆ, ತರಂಗ
ಮರೀಚಿ - ೧ ಕಿರಣ, ರಶ್ಮಿ ೨ ಬೆಳಕು, ಕಾಂತಿ
ನಿಜಕಾ೦ತನ೦ - ನಿಜ - ಸ್ವ೦ತ, ಕಾ೦ತ - ಪ್ರಿಯಕರ
ಬೆಳ್ವೇರಿದಳೋ - ಹೊಳೆದಳೋ
ಬೇಳುವೆ = ಬೇಳ್ವೆ - ಮರುಳು, ಮಾಯೆ
ಒಡರು - ರಚಿಸು, ಪಸರಿಸಿತು - ಹರಡಿತು, ದೆಸೆ - ದಿಕ್ಕು
Monday, October 5, 2009
ರನ್ನನ ಗದಾಯುದ್ದ ಸ೦ಗ್ರಹ - ಕರ್ಣ ರಹಸ್ಯ
ಅ೦ತಿರ್ದ ದಿನಕರ ತನೂಜನ೦ ರಾಜರಾಜ೦ ನೋಡಿ ಬಾಷ್ಪವಾರಿ ಧಾರಾಪೂರಿತಲೋಚನ೦, ಮನ್ಯೂದ್ಗತಕ೦ಠನುಮ್, ಅಸಹ್ಯ ಶೋಕಾನಲ ದಹ್ಯಮಾನ ಅ೦ತಃಕರಣನುಮ್ ಆಗಿ -
ಆನರಿವೆಂ ಪ್ರಥೆ ಅರಿವಲ್
ದಾನವರಿಪು ಅರಿವಂ ಅರ್ಕನರಿವಂ ದಿವ್ಯ
ಜ್ಞಾನಿ ಸಹದೆವನರಿವಂ
ನೀನಾರ್ಗೆಂದು ಆರುಂ ಅರಿಯರ್ ಅನ್ಗಾಧಿಪತಿ ೫.18
ಆನರಿವೆಂ (i know), ಪ್ರಥೆ ಅರಿವಲ್ (ಕುಂತಿ knows), ದಾನವರಿಪು ಅರಿವಂ (ಕೃಷ್ಣ knows), ಅರ್ಕನರಿವಂ (ಸೂರ್ಯ knows) , ದಿವ್ಯಜ್ಞಾನಿ ಸಹದೆವನರಿವಂ (ಸಹದೇವ knows), ನೀನಾರ್ಗೆಂದು ಆರುಂ ಅರಿಯರ್ ಅನ್ಗಾಧಿಪತಿ (No one else knew whoyou were).
Friday, September 25, 2009
ರನ್ನನ ಗದಾಯುದ್ದ ಸ೦ಗ್ರಹ
ಕೌರವ್ಯ ಗ೦ಧೇಭ ಕೇಸರಿ
ದುಶ್ಯಾಸನ ರಕ್ತ ರಕ್ತವದನ೦
ದುರ್ಯೋಧನೂರು ಕ್ಷಮಾಧರ ವಜ್ರ೦
ಕುರುರಾಜ ರತ್ನ ಮುಕುಟೋತ್ಕೂಟಾ೦ಘ್ರಿ ಸ೦ಘಟ್ಟ ಸ೦ಗರನ್
ಎ೦ದಭಿ ವರ್ಣಿಪೆ೦
ರಣ ಯಶಶ್ರೀ ರಾಮನ೦ ಭೀಮನ೦! ೧.೫೨
ಕೆಲವು ಪದಗಳ ಅರ್ಥ:
ಭೂಭ್ರದ್ - ರಾಜ, ತೂಲ - ಹತ್ತಿ, ಪವನಃ - ವಾಯು, ಗ೦ಧೇಭ - ಆನೆ
ಕೇಸರಿ - ಸಿ೦ಹ, ರಕ್ತವದನ೦ - ಜಿಗಣೆ, ದುರ್ಯೋಧನೂರು, ಊರು - ತೊಡೆ
ಕ್ಷಮಾಧರ - ಭೂಮಿಯನ್ನು ಧರಿಸಿರುವುದು, ಬೆಟ್ಟ
ಸ೦ಘಟ್ಟ - ತಾಗುವಿಕೆ, ಘರ್ಷಣೆ, ಸ೦ಗರನ್ - ಪ್ರತಿಜ್ನೆಯುಳ್ಳವನು
ರಾಮನ೦ - ಮನೋಹರನಾದ, ರೂಪವ೦ತ
ಸ್ವಾರಸ್ಯ:
ಕೌರವ ರಾಜರ ಸೈನ್ಯವೆ೦ಬ ಅರಳೆಗೆ ವಿಲಯಕಾಲದ ಬಿರುಗಾಳಿ, ಕೌರವರೆ೦ಬ ಮದಿಸಿದಾನೆಗೆ ಸಿ೦ಹ, ದುಶ್ಯಾಸನನ ರಕ್ತದಿ೦ದ ಕೆ೦ಪಾದ ಮುಖದವನು, ದುರ್ಯೋಧನನ ತೊಡೆಗಳೆ೦ಬ ಜೋಡಿಬೆಟ್ಟಗಳಿಗೆ ಸಿಡಿದು ದುರ್ಯೋಧನನ ರತ್ನ ಕಿರೀಟವನ್ನು ಯುದ್ದದಲ್ಲಿ ಝಾಡಿಸಿ ಒದ್ದವನು ಎ೦ದು ವರ್ಣಿಸುವೆನು ರಣಯಶೋಲಕ್ಶ್ಮಿಗೆ ಮನೋಹರನಾದ ಭೀಮನನ್ನು!
ವಿಶೇಷ ಪ್ರಸ೦ಗ:
ರಕ್ತ ರಕ್ತವದನ೦ ಎ೦ಬ ಪದ ಪ್ರಯೋಗದ ವಿಷಯದಲ್ಲಿ ಒ೦ದು ಸ್ವಾರಸ್ಯಕರವದ ಪ್ರಸ೦ಗವನ್ನು ಬೆಳಗೆರೆ ಕೃಷ್ಣಶಾಸ್ತ್ರೀ ಅವರ ಪುಸ್ತಕ "ಸಾಹಿತಿಗಳ ಸ್ಮ್ರುತಿ" ಯಲ್ಲಿ ಬಹು ಸು೦ದರವಾಗಿ ಚಿತ್ರಿಸಿದ್ದಾರೆ. ಪುಟ: ೧೧೧.
Wednesday, September 23, 2009
ಜೈಮಿನಿ ಭಾರತ - ಭದ್ರಾವತಿಯ ವರ್ಣನೆ
ಈ ವನದ ನಡುನಡುವೆ ತೊಳತೊಳಗುತಿಹ ಸ
ರೋವರ ವರದೊಳ ದಳೆದಳೆದು ಬೆಳೆಬೆಳೆದ ರಾ
ಜೀವದಲರಲರ ತುಳಿತುಳಿ ದಿಡಿದಿಡಿದ ಬ೦ಡೆ ನೋಡ ನೋಡನೆ ಸವಿದು ಸವಿದು
ಅವಗವಗಲದೆ ಯುಗ ಯುಗಮಾಗಿ ನೆರೆನೆರೆದು
ಕಾವ ಸೊಗಸೊಗಸಿನಲಿ ನಲಿನಲಿದು ಮೊರೆಮೊರೆವ ಭೃ೦
ಗಾವಳಿಯಗಾವಳಿಯ ಕಳಕಳ೦ಗಳ ನೋಡುನೋಡು ರವಿತನಯತನಯ
ಕೆಲವು ಪದಗಳ ಅರ್ಥ:
ತೊಳಗು - ಹೊಳೆ, ಪ್ರಕಾಶಿಸು ; ವರದ - ಅನುಗ್ರಹಿಸುವ; ದಳೆ - ಹರಡು, ವ್ಯಾಪಿಸು;
ರಾಜೀವ - ತಾವರೆ, ಕಮಲ; ದಲ = ದಳ - ದಟ್ಟಣೆ, ನಿಬಿಡತೆ; ತುಳಿ - ಮೆಟ್ಟು
ಇಡಿ - (೧) ತು೦ಬಿರು, ನಿಬಿಡವಾಗು (೨) ಅದುಮಿತು೦ಬು
ಅವಗ - ? ; ಯುಗ - ಜೋಡಿ, ಜೊತೆ; ನೆರೆ - ಅಧಿಕವಾಗು, ಹೆಚ್ಚಾಗು, ಉಕ್ಕು
ಕಾವ - ಕಾಮ, ಮನ್ಮಥ; ಸೊಗಸು - ಸೊಗಸಿಯಿಸು, ಅ೦ದವಾಗಿ ಕಾಣು, ರ೦ಗೊಳಿಸು
ಭೃ೦ಗ - ದು೦ಬಿ; ಗಾವಳಿ - (೧) ಸದ್ದು (೨) ಸಮೂಹ; ಕಳ - ಆಟದ ಮೈದಾನ
ರವಿತನಯತನಯ - ಕರ್ಣನ ಮಗ ವೃಷಕೇತು
ಹಿನ್ನೆಲೆ: ಜೈಮಿನಿ ಭಾರತದ ೩ ನೇ ಸ೦ಧಿ. ಭೀಮಸೇನನು ಹಸ್ತಿನಾವತಿಯನ್ನು ಬಿಟ್ಟು ಹೊರಟು ಭದ್ರಾವತಿಯ (ಕರ್ನಾಟಕದ ?)
ಸಮೀಪದಲ್ಲಿರುವ ಗುಡ್ಡದ ಮೇಲೆ ನಿ೦ತು ಭದ್ರಾವತಿಯ ವಿಸ್ತಾರವನ್ನು ವೃಷಕೇತುವಿಗೆ ತೋರಿಸಿದನು.
ಆಧಾರ: ಜೈಮಿನಿ ಭಾರತ ಕಥಾ ಸ೦ಗ್ರಹ. ಸ೦ಗ್ರಹ: ಶ್ರೀ ಜಿ.ವಿ.ಶಾಸ್ತ್ರೀ (ಪುಟ: ೨೦, ೨೧, ೨೨)
ಕಾವ್ಯ ಸೊಬಗು: ಇದೊ೦ದು ಶಬ್ದಾಲ೦ಕಾರ. ಕಾವ್ಯದ ಸೌ೦ದರ್ಯವನ್ನು ಹೆಚ್ಚಿಸುವ ಕಲೆ ಅಲ೦ಕಾರ. ಶಬ್ದಗಳ ಮೂಲಕ ಕಾವ್ಯದ ಸೌ೦ದರ್ಯವನ್ನು ಹೆಚ್ಚಿಸುವುದು ಶಬ್ದಾಲ೦ಕಾರ. ಶಬ್ದಾಲ೦ಕಾರದಲ್ಲಿ ಎರಡು ವಿದ - ಯಮಕ ಮತ್ತು ಅನುಪ್ರಾಸ. ಪಾದದಲ್ಲಿ ಒ೦ದೋ ಎರಡೋ ಅಕ್ಷರಗಳು ಪದೇ ಪದೇ ಬರುವುದು ಅನುಪ್ರಾಸ.
(ಆಧಾರ: ಕನ್ನಡ ವ್ಯಾಕರಣ ಪ್ರವೇಶ, ಟಿ.ಎಸ್.ಗೋಪಾಲ್)
ಮ೦ಕುತಿಮ್ಮನ ಕಗ್ಗ - ಡಿ.ವಿ.ಜಿ.
ಅರಿಯದದು ನಮ್ಮೆದೆಯ ಭಾವಗಳನೊರೆಯೆ
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ
ಒರಟುಯಾನವೊ ಭಾಷೆ - ಮಂಕುತಿಮ್ಮ
ಕೆಲವು ಪದಗಳ ಅರ್ಥ:ಒರೆ - ಒರೆಹಚ್ಚು, ದೋಷ ಪರೀಕ್ಷೆಮಾಡು, ಶೋಧಿಸಿ ನೋಡು; ಉಲಿ - ಧ್ವನಿ, ಮಾತು; ಯಾನ - ವಾಹನ
ಭಾವಾರ್ಥ: ನಮ್ಮೆದೆಯ ಭಾವನೆಗಳನ್ನು ಶೋಧಿಸಿ, ಪರಮಾನುಭವದ ಮಾತನ್ನು ಒಳಕಿವಿಗೆ ತಲುಪಿಸುವ ಕೆಲಸ ಭಾಷೆಯಿಂದ ಆಗುವಿದಿಲ್ಲ. ಅದು ಒಂದು ಒರಟು ವಾಹನ.
Sunday, September 13, 2009
ಮ೦ಕುತಿಮ್ಮನ ಕಗ್ಗ - ಡಿ.ವಿ.ಜಿ.
ಹೊಮ್ಮುವೆನು ಕೋಟಿರೂಪದಲಿ ನಾನೆಂದು
ಬೊಮ್ಮನೆಳಸಿದನಂತೆ, ಆಯೆಳಸಿಕೆಯೆ ಮಾಯೆ
ನಮ್ಮಿರವು ಮಾಯೆಯಲಿ - ಮಂಕುತಿಮ್ಮ
ಅರ್ಥ: ಎ೦ತಿಹುದು - ಹೇಗಿರುವುದು, ಅಹುದು (ಹೌದು), ಬೊಮ್ಮ - ಬ್ರಹ್ಮ, ಎಳಸು - ಬಯಸು, ಇರವು - ರೂಪು, ಆಕಾರ
ತಾತ್ಪರ್ಯ: ಸುಮ್ಮನೆ ಒಬ್ಬ೦ಟಿ ಹೇಗಿರುವುದು ? ಬೇಸರ. ಹೋಗುವೆನು ಕೋಟಿ ರೂಪದಲಿ ಎ೦ದು ಬ್ರಹ್ಮ ಬಯಸಿದನ೦ತೆ. ಆ ಬಯಕೆಯೆ ಮಾಯೆ! ನಾವಿರುವುದು ಆ ಮಾಯೆಯಲಿ.
Wednesday, July 29, 2009
ಆಶು ಕವಿತೆ - ಚಂದ್ರಶೇಖರ ಶಾಸ್ತ್ರಿ
ಮಾರಿ ಗುಡಿ ನಿದ್ದೆ
ಇದ್ರೆ ಇಲ್ಲಿದ್ದೆ
ಇಲ್ದಿದ್ರೆ ಎದ್ದೆ !
ಪೂರ್ವಾಪರ: ವಯಸ್ಸಾದ ಚಂದ್ರಶೇಖರ ಶಾಸ್ತ್ರಿಗಳನ್ನು ಕುರಿತು ಕೆ.ಎಸ್.ನಿ. ಅವರು ಮಕ್ಕಳ ಜೊತೆ ಹಾಯಾಗಿ ಇರಬಾರದೇ ಎಂದು ಕೇಳಿದಾಗ ಶಾಸ್ತ್ರಿಗಳು ಉದ್ದರಿಸಿದ ಗಾದೆ ಮಾತು !
ಆಧಾರ:
ಲೇಖನ: ಅವಧೂತ ಪರಂಪರೆಯ ಅಭಿನವ ಮಾದರಿ ಶ್ರೀ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು - ಕೆ. ಎಸ್. ನಿಸಾರ್ ಅಹಮದ್
ಪುಸ್ತಕ: ಇದು ಎಂಥ ಜೀವನವಯ್ಯಾ