Wednesday, July 29, 2009

ಜೈಮಿನಿ ಭಾರತ

ಆಧಾರ: ಮರೆಯಲಾದೀತೆ ?... ಬೆಳಗೆರೆ ಕೃಷ್ಣಶಾಸ್ತ್ರಿ

ವನಮಾಲಿಯಂದದಿಂ ಪದ್ಮಿ ಪದ್ಮಿಯವೋಲ್ ಭು
ವನಕುಕ್ಷಿ ಭುವನಕುಕ್ಷಿಯ ತೆರದಿ ಹಂಸಲೋ
ಚನಶೋಭಿ ಹಂಸಲೋಚನಶೋಭಿಯಂತೆ ವರಚಕ್ರಿ ವರಚಕ್ರಿಯವೋಲು
ಅನಿಮಷಾಶ್ರಯ ಮೂರ್ತಿಯನಿಮಿಷಾಶ್ರಯಮೂರ್ತಿ
ಯೆನೆ ಕುವಲಯಾಧಾರಿ ಕುವಲಯಾಧಾರಿವೋಲ್
ವನಮಾಲಿಯೆನಿಸಿ ರಂಜಿಸುವ ಕಾಸರಮಂ ಸರ್ವಮಂಗಳೆ ಕಂಡಳು

ಇದೊಂದು ಮಾಲೋಪ ಮಾಲಂಕರ. ಸರೋವರವನ್ನು, ವಿಷ್ಣುವನ್ನು ಹೂಮಾಲೆ ಕಟ್ಟುವ ಪ್ರಕ್ರಿಯೆಯ ಲಯದಲ್ಲಿ ವರ್ಣಿಸಿರುವುದು ಈ ಪದ್ಯದ ವಿಶೇಷ.

'ವನಮಾಲಿ' ಎಂದರೆ ವಿಷ್ಣು - ಕಮಲದ ಹಾರಗಳನ್ನು ಧರಿಸಿರುವನು ವಿಷ್ಣು . ಕಮಲ ಪುಷ್ಪಗಳಿಂದ ಮಾಲೆಯ ಹಾಗಿರುವ ಸರೋವರ (ಪದ್ಮಿ - ಸರೋವರ)
ಭುವನ ಎಂದರೆ ಭೂಮಿ - ಇಡೀ ಭೂಮಂಡಲವನ್ನು ತನ್ನ ಹೊಟ್ಟೆಯಲ್ಲಿ ಅಡಗಿಸಿ ಇಟ್ಟಿಕೊಂಡಿರುವವನು - ವಿಷ್ಣು. ಭು ಎಂದರೆ ನೀರು, ಯಾವುದು ನೀರನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆಯೋ - ಆ ಸರೋವರ.
ಹಂಸಲೋಚನ ಎಂದರೆ ವಿಷ್ಣು - ಹಂಸದಂತೆ ಕಣ್ಣು ಉಳ್ಳವನು. ಹಾಗೆಯೇ ಸರೋವರದಲ್ಲಿ ಹಂಸ ಪಕ್ಷಿಗಳೂ ಇವೆ.
ವರಚಕ್ರಿ ವಿಷ್ಣುವಿನ ಹೆಸರು. ಆ ಸರೋವರದಲ್ಲಿ ಚಕ್ರವಾಕ ಪಕ್ಷಿಗಳು ಇವೆ.
ಅನಿಮಿಷ ಎಂದರೆ ದೇವತೆಗಳು - ದೇವತೆಗಳಿಗೆ ಆಶ್ರಯ ನೀಡಿರುವನು ವಿಷ್ಣು. ನಮ್ಮಲ್ಲಿ ಕಾಲಗಣನೆಗೆ ಕಣ್ ರೆಪ್ಪೆಯನ್ನು ಅದಾರವಾಗಿ ಇಟ್ಟುಕೊಳ್ಳುವ ಕ್ರಮ ಇದೆ. ರೆಪ್ಪೆ ಮುಚ್ಚಿ ತೆಗೆಯುವ ಅವಧಿಗೆ ನಿಮಿಷ ಎಂದೂ ಕರೆಯುತ್ತಾರೆ. ಕಣ್ ರೆಪ್ಪೆ ಇರದ ಪ್ರಾಣಿಗಳಲ್ಲಿ ಮೀನೂ ಸಹ ಒಂದು.
ಕುವಲಯ ಎಂದರೆ ಭೂಮಂಡಲ - ಯಾರು ಭೂಮಂಡಲಕ್ಕೆ ಆಧಾರ ವಾಗಿದ್ದಾನೆಯೋ - ಆತ ವಿಷ್ಣು. ಕು - ಎಂದರೆ ನೀರು ಎಂಬ ಅರ್ಥವೂ ಇದೆ. ಕುವಲಯಧಾರಿ ಎಂದರೆ ನೀರಿನ ಸಮೂಹ.

ಹೀಗೆ ವನಮಾಲಿ ಎಂಬ ಶಬ್ದದಿಂದ ಶುರು ಮಾಡಿದ ಲಕ್ಷ್ಮೀಶ ಹೂವಿನ ಮಾಲೆ ಕೊನೆಯ್ಯಲ್ಲಿ ವನಮಾಲಿ ಎಂಬುದರಿಂದಲೇ ಕೊನೆ ಮಾಡುತ್ತಾನೆ ( ಎರಡು ಕೊನೆಯ ದಾರಗಳನ್ನು ಗಂಟು ಹಾಕುವ ಹಾಗೆ ).

ಕೆಲವು ಪದಗಳ ಅರ್ಥ:
ಕುಕ್ಷಿ - ಬಸಿರು, ಹೊಟ್ಟೆ
ತೆರ - ರೀತಿ, ಕ್ರಮ.
ಶೋಭಿ - ಶೋಭಿಸುವುದು
ವೋಲು - ಅಂತೆ, ಹಾಗೆ

No comments:

Post a Comment